ಮಗು ಗರ್ಭದಲ್ಲಿ ಇರುವಾಗಲೇ ಹೀಗೆ ಮಾಡಿದರೆ ತಾಯಿ-ಮಗು ಬಾಂಧವ್ಯ ಮತ್ತಷ್ಟು ಗಟ್ಟಿಯಾಗುವುದು!

ತಾಯಿ ಹಾಗೂ ಮಗುವಿನ ಮಧ್ಯೆ ಸಾಮಾನ್ಯವಾಗಿ ಒಂದು ಉತ್ತಮ ಬಾಂಧವ್ಯ ಇರುತ್ತದೆ. ಆದರೆ ಹೆಚ್ಚಿನ ತಾಯಂದಿರ ಜೊತೆಗೆ ಮಕ್ಕಳು ಅಷ್ಟೊಂದು ಚೆನ್ನಾಗಿ ಬೆರೆಯೋದಿಲ್ಲ. ಅವರ ಜೊತೆಗೆ ಇರೋದಕ್ಕೆ ಇಷ್ಟ ಪಡೋದಿಲ್ಲ. ಇದಕ್ಕೆ ಕಾರಣ ಹಲವು ಇರಬಹುದು.

ಅದರಲ್ಲಿ ಮುಖ್ಯವಾಗಿ ಮಗು ತಾಯಿಯ ಹೊಟ್ಟೆಯಲ್ಲಿದ್ದಾಗ ತಾಯಿ ಹಾಗೂ ಮಗುವಿನ ಒಡನಾಟ ಉತ್ತಮವಾಗಿ ಇರದಿದ್ದರೆ ಮಕ್ಕಳು ತಾಯಂದಿರ ಜೊತೆಗೆ ಅಷ್ಟೊಂದು ಉತ್ತಮ ಸಂಬಂಧವನ್ನು ಹೊಂದುವುದಿಲ್ಲ. ತಾಯಿಯ ಜೊತೆಗೆ ಮಕ್ಕಳಿಗೆ ಅಟ್ಯಾಚ್ ಮೆಂಟ್ ಇರೋದಿಲ್ಲ. ಅಷ್ಟಕ್ಕು ಹೊಟ್ಟೆಯಲ್ಲಿರುವ ಮಗುವಿನ ಜೊತೆಗೆ ತಾಯಿಯು ಉತ್ತಮ ಬಾಂಧವ್ಯವನ್ನು ಹೊಂದುವಂತೆ ಮಾಡೋದು ಹೇಗೆ ಅನ್ನೋದನ್ನು ತಿಳಿಯೋಣ.

1. ಮಗುವಿನ ಜೊತೆಗೆ ಮಾತನಾಡುತ್ತಿರಬೇಕು:
ಮಗು ತಾಯಿಯ ಹೊಟ್ಟೆಯಲ್ಲಿ ಇರುವ ಸಂದರ್ಭದಲ್ಲಿ ತಾಯಿಯು ತನ್ನ ಮಗುವಿನ ಜೊತೆಯಲ್ಲಿ ಮಾತನಾಡುತ್ತಾ ಇರಬೇಕು. ಅದರ ಕ್ಷೇಮ, ಸಮಾಚಾರ ವಿಚಾರಿಸುತ್ತಾ ಇರಬೇಕು. ಮಗುವಿಗೆ ಯಾವುದಾರೂ ಹೆಸರಿಟ್ಟು ಕರೆಯುತ್ತಿರಿ. ಆಗ ಮಗು ನಿಮ್ಮ ಮಾತನ್ನು ಆಲಿಸುತ್ತದೆ. ಹಾಗೂ ಅದಕ್ಕೆ ಪ್ರತಿಕ್ರಿಯೆ ನೀಡುತ್ತದೆ.

2. ಹಾಡು ಕೇಳಿಸುತ್ತಿರಿ:
ನಿಮಗೆ ಹಾಡು ಕೇಳುವ ಅಭ್ಯಾಸ ಇದ್ದರೆ ತಾಯಿಯಾಗಿರುವ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಹಾಡನ್ನು ಕೇಳಿ. ಭಾವಗೀತೆ, ಭಕ್ತಿ ಗೀತೆ ಜೊತೆಗೆ ಸಿನಿಮಾ ಹಾಡುಗಳನ್ನು ಕೂಡ ಕೇಳಬಹುದು. ಹೊಟ್ಟೆಯಲ್ಲಿ ಇರುವ ಮಗು ಈ ಹಾಡನ್ನು ಎಂಜಾಯ್ ಮಾಡುತ್ತದೆ. ಸಾಧ್ಯವಾದರೆ ನೀವೇ ಹಾಡು ಹಾಡಿ. ಜೊತೆಗೆ ನಿಮಗೆ ಪುಸ್ತಕ ಓದುವ ಅಭ್ಯಾಸ ಇದ್ದರೆ ಜೋರಾಗಿ ಓದಿ. ಮಗು ಕೂಡ ಅದನ್ನು ಕೇಳಿಸಿಕೊಳ್ಳುತ್ತದೆ.

3. ನೃತ್ಯ ಮಾಡಿ:
ಗರ್ಭಿಣಿಯಾಗಿರುವ ಸಂದರ್ಭದಲ್ಲಿ ನೃತ್ಯ ಮಾಡಬಾರದು ಎಂದೇನಿಲ್ಲ. ಮುಂಜಾಗರೂಕತೆಯಿಂದ ಬರೀ ಕೈ, ಕಾಲು ಅಲುಗಾಡಿಸುತ್ತಾ ನೃತ್ಯ ಮಾಡಬಾರದು. ನಿಮ್ಮ ಜೊತೆಗೆ ಮಗು ಕೂಡ ಡಾನ್ಸ್ ಎಂಜಾಯ್ ಮಾಡುತ್ತೆ. ಇದರಿಂದ ನಿಮ್ಮಿಬ್ಬರ ಬಾಂಧವ್ಯವೂ ಉತ್ತಮವಾಗುತ್ತದೆ. ಆದರೆ ಡಾನ್ಸ್ ಮಾಡುವಾಗ ಹಾರೋದು, ನೆಗೆಯೋದಕ್ಕೆ ಹೋಗಬೇಡಿ. ಇದರಿಂದ ತೊಂದರೆ ಉಂಟಾಗಬಹುದು.

4. ಧ್ಯಾನ ಮಾಡಿ:
ಗರ್ಭಿಣಿಯಾಗಿರುವ ಸಂದರ್ಭದಲ್ಲಿ ನಿಮ್ಮ ಮಾನಸಿಕ ಆರೋಗ್ಯಕ್ಕಾಗಿ ನೀವು ಧ್ಯಾನ ಮಾಡುತ್ತಿದ್ದರೆ ತುಂಬಾನೇ ಒಳ್ಳೆಯದು. ಸಮಯ ಸಿಕ್ಕಾಗಲೆಲ್ಲಾ ಧ್ಯಾನದಲ್ಲಿ ನಿರತರಾಗಿ. ಅಷ್ಟೇ ಅಲ್ಲ, ಮಗುವಿನ ಜೊತೆಗೆ ನೀವು ಸಂಪರ್ಕ ಸಾಧಿಸುವಂತೆ ನೋಡಿಕೊಳ್ಳಿ. ನಿಮ್ಮ ಮಾನಸಿಕ ಆರೋಗ್ಯ ಚೆನ್ನಾಗಿದ್ದರೆ ಮಗುವಿನ ಮಾನಸಿಕ ಆರೋಗ್ಯ ಕೂಡ ಉತ್ತಮವಾಗಿರುತ್ತದೆ.

5. ಮಗುವಿಗಾಗಿ ಕುಟುಂಬದ ಸಮಯ ಮೀಸಲಿಡಿ:
ಒರ್ವ ಮನುಷ್ಯನಿಗೆ ಕುಟುಂಬದ ಸಮಯ ಎಷ್ಟು ಮುಖ್ಯವಾಗುತ್ತದೆಯೋ ಅದೇ ರೀತಿ ಹೊಟ್ಟೆಯಲ್ಲಿರುವ ಮಗುವಿಗೂ ಕೂಡ ಕುಟುಂಬಕ್ಕಾಗಿ ಸಮಯ ಮೀಸಲಿಡುವುದು ಅಷ್ಟೇ ಮುಖ್ಯವಾಗುತ್ತದೆ. ಸಮಯ ಸಿಕ್ಕಾಗಲೆಲ್ಲಾ ಹೊಟ್ಟೆಯಲ್ಲಿರುವ ಮಗುವಿನ ಜೊತೆಗೆ ತಾಯಿ ಮಾತ್ರವಲ್ಲದೇ ತಂದೆ ಕೂಡ ಮಾತನಾಡಬೇಕು. ಒಂದು ವೇಳೆ ನಿಮಗೆ ಮೊದಲೇ ದೊಡ್ಡ ಮಗುವಿದ್ದರೆ ಆ ಮಗುವಿನಲ್ಲೂ ಕೂಡ ಮಾತನಾಡಿಸಿ. ಆಗ ಹೊಟ್ಟೆಯಲ್ಲಿರುವ ಮಗುವಿಗೆ ಕುಟುಂಬದ ಜೊತೆಗೆ ಸಂಬಂಧ ಉತ್ತಮವಾಗುತ್ತದೆ.

6. ಯೋಗ ಮತ್ತು ವ್ಯಾಯಾಮ ಮಾಡಿ:
ಗರ್ಭಿಣಿಯು ಕುಂತಲ್ಲೇ ಕೂತಿರಬಾರದು. ಬದಲಾಗಿ ಈ ಸಮಯದಲ್ಲಿ ಆಕೆಗೆ ದೈಹಿಕ ವ್ಯಾಯಾಮ ಮುಖ್ಯವಾಗಿ ಬೇಕಾಗುತ್ತದೆ. ಹೀಗಾಗಿ ಸಮಯ ಸಿಕ್ಕಾಗಲೆಲ್ಲಾ ಯೋಗ, ವ್ಯಾಯಾಮ ಮಾಡುತ್ತಿರಿ. ಇದರಿಂದ ತಾಯಿ ಹಾಗೂ ಮಗುವಿನ ಆರೋಗ್ಯಕ್ಕೂ ಒಳ್ಳೆಯದು. ಜೊತೆಗೆ ನೀವು ನಿತ್ಯ ಒಂದೇ ಸಮಯದಲ್ಲಿ ಯೋಗ, ವ್ಯಾಯಾಮ ಮಾಡುತ್ತಿದ್ದರೆ ಮಗುವಿಗೂ ಕೂಡ ಈ ಸಮಯ ತಿಳಿಯುತ್ತದೆ.

7. ಹೊಟ್ಟೆಯನ್ನು ಸವರುತ್ತಿರಿ:
ನೀವು ಮಗುವಿನ ಜೊತೆಗೆ ಮಾತನಾಡುವ ಸಂದರ್ಭದಲ್ಲಿ ಮಗುವಿನ ಹೊಟ್ಟೆ ಸವರುತ್ತಿರಬೇಕು. ಈ ರೀತಿ ಹೊಟ್ಟೆ ಸವರುತ್ತಾ ಮಾತನಾಡಿದರೆ ಮಗುವಿಗೆ ಅದರ ಜೊತೆಗೆ ಮಾತನಾಡುತ್ತಿದ್ದೀರಿ ಅನ್ನೋದು ಗೊತ್ತಾಗುತ್ತದೆ. ಇನ್ನೂ ನಿಮ್ಮ ಹೊಟ್ಟೆಯ ಮೇಲೆ ಸ್ಟ್ರೆಚ್ ಮಾರ್ಕ್ ಇದ್ದರೆ ಅದಕ್ಕೆ ಆಲಿವ್ ಎಣ್ಣೆಯನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ.

8. ಹೂವುಗಳ ಸುವಾಸನೆಯನ್ನು ಅನುಭವಿಸಿ:
ಆರ್ಟಿಫಿಶಿಯಲ್ ಸುವಾಸನೆ ಬೀರುವ ಪರ್ಫ್ಯೂಮ್ ಗಳಿಗಿಂತ ನೈಸರ್ಗಿಕ ಹೂವುಗಳ ಸುವಾಸನೆ ಗರ್ಭಿಣಿಯರ ಆರೋಗ್ಯಕ್ಕೆ ಉತ್ತಮ. ಹೀಗಾಗಿ ಸಮಯ ಸಿಕ್ಕಾಗ ಗಾರ್ಡನ್ ಗೆ ಹೋಗಿ ಹೂವುಗಳ ಸುವಾಸನೆ ತೆಗೆದುಕೊಳ್ಳಿ. ಪ್ರತಿಯೊಂದು ಹೂವನ್ನು ನೋಡಿದಾಗಲೂ ಅದರ ಹೆಸರನ್ನು ಹೇಳುತ್ತಿರಿ. ಮಗು ಕೂಡ ಅದನ್ನು ಅರ್ಥ ಮಾಡಿಕೊಳ್ಳುತ್ತದೆ. ಆರೋಗ್ಯದ ದೃಷ್ಟಿಯಿಂದ ನೈಸರ್ಗಿಕ ಹೂವುಗಳ ಸುವಾಸನೆ ಒಳ್ಳೆಯದು.